ಚಾಂಪಿಯನ್ ಸಿರ-
ಸ್ಪಷ್ಟವಾದ ರೂಪುರೇಖೆಯುಳ್ಳ ಮತ್ತು ಸುಸಂಗತವಾಗಿರುವ ಬೆಣಚುಕಲ್ಲು ಹಾಗೂ ಇತರ ಖನಿಜಗಳಿಂದ ತುಂಬಿರುವ ಸೀಳಿನ ಪ್ರದೇಶಗಳ ಪೈಕಿ ಧಾರವಾಡ ಶ್ರೇಣಿಯ ಕೋಲಾರದ ಶಿಸ್ಟ್ ವಲಯದಲ್ಲಿ ಉತ್ತರ ದಕ್ಷಿಣವಾಗಿ ಹಬ್ಬಿರುವ ಎಳೆ. ಕೋಲಾರದ ಚಿನ್ನದ ಕ್ಷೇತ್ರದಲ್ಲಿ ಕೆಲವೆಡೆಗಳಲ್ಲಿ ಗೋಚರಿಸುವ ಅನೇಕ ಬೆಣಚುಕಲ್ಲಿನ ಬಂಡೆಸಾಲುಗಳ ಪೈಕಿ ಸಿರವೂ ಒಂದು. ಸಿರದ ಒಡಲಿನಲ್ಲಿ ಚಿನ್ನದ ಪರಿಮಾಣ ಹೆಚ್ಚಾಗಿರುವ ಭಾಗಗಳೂ ಚಿನ್ನ ಇಲ್ಲದಿರುವ ಭಾಗಗಳೂ ಇದ್ದುವು. ಚಿನ್ನ ಹೆಚ್ಚಾಗಿದ್ದ ಎಡೆಗಳಿಗೆ, ಎಂದರೆ, ಎಲ್ಲಿ ಗಣಿ ಕೆಲಸ ಲಾಭದಾಯಕವೋ ಆ ಎಡೆಗಳಿಗೆ ಅದುರಿನ ಪ್ರರೋಹಗಳೆಂದು (ಓರ್ ಶೂಟ್ಸ್) ಹೆಸರು. ಚಾಂಪಿಯನ್ ಸಿರದಲ್ಲಿ ಇಂಥ ಅನೇಕ ಲಾಭದಾಯಕವಾದ ಅದುರಿನ ಪ್ರರೋಹಗಳಿದ್ದುದರಿಂದ ಕೋಲಾರ ಚಿನ್ನದ ಗಣಿಗಳ ಕ್ಷೇತ್ರದ ಅನೇಕ ಉತ್ಪಾದಕ ಗಣಿಗಳು ಅಲ್ಲಿ ಸ್ಥಾಪಿತವಾಗಿದ್ದುವು. ಈ ಸಿರದ ಕಾರಣವಾಗಿ ಉತ್ಪಾದಕ ಗಣಿಗಳ ಪೈಕಿ ಒಂದಕ್ಕೆ ಚಾಂಪಿಯನ್ ರೀಫ್ ಮೈನ್ ಎಂಬ ಹೆಸರು ಬಂತು. ಇಲ್ಲಿನ ಬೆಣಚುಕಲ್ಲಿನ ಬಣ್ಣ ಕಪ್ಪು ನೀಲಿ. ಇದು ತೀಕ್ಷ್ಣ ಕಾಂತಿಯಿಂದ ಬೆಳಗುತ್ತದೆ. ಮುದುರುವಿಕೆ ಮುಂತಾದ ರಚನಾದೋಷಗಳಿಗೆ ಇದರ ರೂಪ ಈಡಾಗಿ ಎಡೆಗಳಲ್ಲಿ ಅದು ಪಟ್ಟಿಗಟ್ಟಿದ ಅಥವಾ ಪದರಗಟ್ಟಿದ ರಚನೆಯನ್ನು ಬೆಳೆಸಿಕೊಂಡು ರಿಬ್ಬನ್ ಹಾಕಿಕೊಂಡಿರುವಂತೆ ಕಾಣುವುದು.

	ಚಾಂಪಿಯನ್ ಸಿರದಲ್ಲಿ ಚಿನ್ನ ಸಾಮಾನ್ಯವಾಗಿ ಅಣುಗಳಂತೆ ಹರಡಿಕೊಂಡಿತ್ತು. ಕಣ್ಣಿಗೆ ನೇರವಾಗಿ ಕಾಣುತ್ತಿರಲಿಲ್ಲ. ಆದರೆ ಉಂಡುಂಡೆಯಾಗಿಯೂ ಫಲಕಗಳಾಗಿಯೂ ಇರುವ ಚಿನ್ನದ ತುಣುಕುಗಳು ಕೆಲವು ಸಲ ಸಿಕ್ಕುತ್ತಿದ್ದುವು. ಚಿನ್ನ ಶುದ್ದವೇ ಎನ್ನಬಹುದಾದ ರೂಪದಲ್ಲಿತ್ತು ಮತ್ತು ಅದುರನ್ನು ಅಗೆದು ಸುಲಭವಾಗಿ ಬೇರ್ಪಡಿಸಬಹುದಾಗಿತ್ತು. ಕೆಳಗಿನಿಂದ ಮೇಲಕ್ಕೆದ್ದು ಬಂದು ಶಿಸ್ಟ್‍ಬಂಡೆಗಳ ಬಿರುಕಿನಲ್ಲಿ ತುಂಬಿಕೊಂಡ ಭೂದ್ರವದಿಂದ ಬೆಣಚುಕಲ್ಲು ಚಿನ್ನ ಮುಂತಾದ ಇತರ ಖನಿಜಗಳೂ ತಂಗಿದುದರ ಪರಿಣಾಮವಾಗಿ ಚಾಂಪಿಯನ್ ಸಿರ ರಚಿತವಾಯಿತೆಂದು ಭಾವಿಸಲಾಗಿದೆ. ಇದರ ಫಲವಾಗಿ ತನಗೆ ಆಧಾರವಾಗಿರುವ ಬಂಡೆ ಅಥವಾ ಶಿಸ್ಟಿನ ನಮೂನೆಯನ್ನೇ ಇದೂ ಅನುಸರಿಸಿತು. ಚಾಂಪಿಯನ್ ಸಿರದ ಅಗಲ ಸಹ ಬಿರುಕಿನ ಪರಿಣಾಮದಂತೆಯೇ ಬಗೆಬಗೆಯಾಗಿವೆ. ಈ ಅಗಲ ಕೆಲವು ಮಿಲಿಮೀಟರುಗಳಿಂದ ಹಿಡಿದು ಒಂಬತ್ತು-ಹನ್ನೆರಡು ಮೀಗಳವರೆಗೂ ಹೋಗುವುದು. ಈ ಪ್ರದೇಶದ ಇತರ ಸಿರದ ಹರಿವುಗಳಿಗೆ ಹೋಲಿಸಿ ನೋಡಿದಾಗ ಚಾಂಪಿಯನ್ ಸಿರದ ಅದುರಿನ ಪ್ರರೋಹಗಳಲ್ಲಿರುವ ಚಿನ್ನ ಅತ್ಯಂತ ಅಧಿಕ ಮೊತ್ತದ್ದಾಗಿತ್ತು. ಒಂದು ಟನ್ ಅದುರನ್ನು ಅರೆದು ಶೋಧಿಸಿದರೆ ಸರಾಸರಿ ಒಂದು ಔನ್ಸಿಗಿಂತಲೂ ಹೆಚ್ಚಾಗಿ ಚಿನ್ನ ಸಿಕ್ಕುತ್ತಿತ್ತು. ಪ್ರಪಂಚದ ಯಾವ ಸ್ವರ್ಣಕ್ಷೇತ್ರದೊಡನೆ ಹೋಲಿಸಿದರೂ ಇದು ಪುಷ್ಕಳವೆಂದು ಭಾವಿಸಲಾಗಿದೆ. ಕೋಲಾರದ ಚಿನ್ನದ ಗಣಿಗಳ ಪೈಕಿ ಚಾಂಪಿಯನ್ ಸಿರದ ಮೇಲೆ ತೋಡಿದ ಗಣಿಯೇ ಅತ್ಯಂತ ಆಳವಾದದ್ದು-3230ಮೀ.
(ಎಂ.ಎಸ್.ಯು.)
ಪರಿಷ್ಕರಣೆ:
ಟಿ. ಆರ್. ಅನಂತರಾಮು
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ